ರಘೂಜಿ ಭೋಸ್ಲೆ -ಮರಾಠ ಸಾಹು ರಾಜನ ಸೇನಾಧಿಕಾರಿ. 1739ರಲ್ಲಿ ಫತೇಸಿಂಗ್‍ನೊಡಗೂಡಿ ಕರ್ನಾಟಕದ ಮೇಲೆ ದಂಡಯಾತ್ರೆ ಕೈಗೊಂಡ. ಇವನಿಗೆ ಆರ್ಕಾಟ್ ದೊರೆತರೂ ಅಲ್ಲಿನ ಸಂಪತ್ತು ಮಾತ್ರ ದೊರಕಲಿಲ್ಲ. ಆರ್ಕಾಟಿನ ನವಾಬ್ ಮರಾಠರ ದಾಳಿಯ ವಿಷಯವನ್ನು ಮೊದಲೇ ತಿಳಿದುಕೊಂಡು ಸಕಲೈಶ್ವರ್ಯವನ್ನು ಪಾಂಡಿಚೇರಿಯ ಫ್ರೆಂಚರ ವಶಕ್ಕೆ ಕಳುಹಿಸಿಬಿಟ್ಟಿದ್ದ. ರಘೂಜಿ ತನ್ನ ದಾಳಿಯನ್ನು ಮುಂದುವರಿಸಿ ಫ್ರೆಂಚ್ ಅಧಿಕಾರಿ ಡುಮಾಸ್‍ನನ್ನು ಹೆದರಿಸಿದ. ಆದರೆ ಕೆಲವು ಶೀಸೆ ಫ್ರೆಂಚ್ ಮಧ್ಯ ಮರಾಠ ಸೇನಾಪತಿಯ ಕೋಪವನ್ನು ಶಮನ ಮಾಡಿದುವು. ಕರ್ಣಾಟಕ ದಾಳಿಯಿಂದ ಯಾವ ಪ್ರಯೋಜನವಾಗದಿರುವುದನ್ನು ಅರಿತ ಸಾಹು ರಘೂಜಿಯನ್ನು ದೂರಿದ. 1740 ರಲ್ಲಿ ರಘೂಜಿ ಪುನಃ ಕರ್ಣಾಟಕಕ್ಕೆ ಹೋಗಿ ತಿರುಚನಾಪಳ್ಳಿಯನ್ನು ಜಯಿಸಿದ. 1740ರಲ್ಲಿ ನಡೆಸಿದ ಕರ್ಣಾಟಕ ದಾಳಿಯಿಂದ ಇತ ಮಹಾರಾಷ್ಟ್ರ ರಾಜ್ಯದ ಬೊಕ್ಕಸಕ್ಕೆ ಏಲೂವರೆ ಲಕ್ಷ ರೂಪಾಯಿ ಸಂಪಾದಿಸಿಕೊಟ್ಟ. ಇದರಿಂದ ಸಾಹು ಸಂತೃಪ್ತನಾದ.

	ರಘೂಜಿ ಬಂಗಾಳದ ಅಲಿವರ್ದಿಖಾನನ ಹೋರಾಟಕ್ಕೆ ನಿಂತ ಮೀರ್ ಹಬೀಬನ ಸಹಾಯಕ್ಕೆ ಭಾಸ್ಕರರಾಮನನ್ನು ಸೇನಾಸಮೇತನಾಗಿ ಕಳುಹಿಸಿಕೊಟ್ಟ. ಆದರೆ ರಘೂಜಿಯ ಸಹಾಯಕ್ಕೆ ಸಕಾಲಕ್ಕೆ ದೊರಕದೆ ಹೋದುದರಿಂದ ಭಾಸ್ಕರರಾಮ ಶತ್ರುಗಳಿಂದ ಪರಾಜಿತನಾಗಿ ಸ್ವದೇಶಕ್ಕೆ ಮರಲಿದ. ಪೇಷ್ವೆ ಮತ್ತು ರಘೂಜಿ ಇವರ ನಡುವೆ ಬಾಂಧವ್ಯ ಮಧುರವಾಗಿರಲಿಲ್ಲ. ಅಧಿಕಾರ ದಾಹವೇ ಇಬ್ಬರ ಸ್ನೇಹಕ್ಕೆ ಮಾರಕವಾಗಿತ್ತು. ಸಾಹು ಇವರಿಬ್ಬರಿಗೂ ರಾಜಿ ಮಾಡಿಸಿ ರಘೂಜಿಗೆ ಕೆಲವು ಪ್ರದೇಶಗಳನ್ನು ಜಾಗೀರಾಗಿ ಕೊಟ್ಟ. 1745ರಲ್ಲಿ ರಘೂಜಿ ಒರಿಸ್ಸವನ್ನು ಗೆದ್ದ. ಆದರೆ ಅದೇ ವರ್ಷ ಡಿಸೆಂಬರ್‍ನಲ್ಲಿ ಮುರ್ಷಿದಾಬಾದ್ ಹತ್ತಿರ ನಡೆದ ಯುದ್ಧದಲ್ಲಿ ಸೋತು ನಾಗಪುರಕ್ಕೆ ಓಡಿದ. 1751ರಲ್ಲಿ ಈತ ಬಂಗಾಳದ ಅಲಿವರ್ದಿಖಾನನಿಂದ ಚೌಥಾಯಿ ಬಾಕಿ 32 ಲಕ್ಷ ರೂಪಾಯಿ ವಸೂಲಿ ಮಾಡಿ, ಪ್ರತಿವರ್ಷ 12 ಲಕ್ಷ ರೂಪಾಯಿ ಪೊಗದಿ ಕೊಡಬೇಕೆಂದು ಅವನಿಗೆ ನೇಮಕ ಮಾಡಿದ. 1755 ರಲ್ಲಿ ಫೆಬ್ರವರಿ 14ರಂದು ರಘೂಜಿ ಮರಣಹೊಂದಿದ.										
(ಬಿ.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ